Saturday, July 12, 2008

ಲಾವಣ್ಯದ ಹುಟ್ಟು ಮತ್ತು ಬೆಳವಣಿಗೆ

ಬೈಂದೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ "ಲಾವಣ್ಯ" ೧೯೭೭ರಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ ಘಟನೆ. ಈ ಪರಿಸರದ ಹವ್ಯಾಸಿ ಕಲಾವಿದರಾದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ್ ಕಾರಂತ್, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿರತ್ನಾಕರ್ ಆಚಾರ್ ಇವರೆಲ್ಲಾರ ಆಶಾ ಕೇಂದ್ರವಾಗಿ ಕುಡಿಯೊಡೆದ ಬೈಂದೂರು ತರುಣ ಕಲಾವೃಂದ, ಲಾವಣ್ಯ ಕಲಾವೃಂದವಾಗಿ, ಲಾವಣ್ಯ-ಬೈಂದೂರು, ಹವ್ಯಾಸಿ ಕಲಾ ಸಂಸ್ಥೆಯಾಗಿ ಬೆಳೆದು ಬಂದ ದಿನಗಳ ನೆನಪು ರೋಮಾಂಚಕ.
೧೯೮೦ರಲ್ಲಿ ’ರೊಟ್ಟಿ ಖುಣ’ ನಾಟಕವನ್ನು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಪ್ರಥಮ ಪಾರಿತೋಷಕ ಹಾಗೂ ಇತರ ಮೊರು ಪಾರೀತೋಷಕ ಪಡೆಯಿತು. ಬೈಂದೂರಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪ್ರಥಮ ಹಾಗೂ ಇತರ ಮೊರು ಪಾರಿತೋಷಕಗಳನ್ನು ಪಡೆದು ಬೈಂದೂರಿನ ಜನತೆ ಭೇಷ್ ಎನ್ನುವಂತಾಯಿತು. ಅಂದಿನಿಂದ ಹೊಸ ಹೊಸ ಸದಸ್ಯರು ಸೇರುತ್ತಾ ಬಂದರು. ಅಂತು ೧೯೭೭ ರಿಂದ ’ತರುಣ ಕಲಾವಿದರು’, ’ತರುಣ ಕಲಾವೃಂದ’, ’ಲಾವಣ್ಯ ಕಲಾವೃಂದ ಎಂಬ ಹೆಸರಿನಿಂದ ಕರೆಯಿಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನೋಂದಾಯಿಸಲ್ಪಟ್ಟ ಈ ಸಂಸ್ಥೆ "ಲಾವಣ್ಯ(ರಿ) ಬೈಂದೂರು" ಎಂಬ ನೂತನ ನಾಮಕರಣದೊಂದಿಗೆ ಯಶಸ್ವಿ ೩೦ವರ್ಷಗಳನ್ನು ಪೂರೈಸುತ್ತಾ ಬಂತು.
ಪ್ರಾರಂಭದ ಕೆಲವು ವರ್ಷಗಳಲ್ಲಿ ಕೇವಲ ಕಲಾವಿದರು ಮಾತ್ರ ತಂಡದ ಸದಸ್ಯರಾಗಿದ್ದು ಯಾವುದೇ ಸದಸ್ಯತ್ವ ಶುಲ್ಕವಿರಲಿಲ್ಲ. ಆರ್ಥಿಕ ಮುಗ್ಗಟ್ಟು ಸದಾ ಕಾಡುತ್ತಿತ್ತು. ನಂತರ ಶ್ರೀ ಪಿ. ಶೇಷಪ್ಪಯ್ಯ ಇವರ ಮಾರ್ಗದರ್ಶನದಲ್ಲಿ ತಂಡವನ್ನು ನಿರ್ದಿಷ್ಟ ನಿಯಮಾವಳಿಗೊಳಪಟ್ಟ ಸಂಸ್ಥೆಯನ್ನಾಗಿ ರೂಪಿಸಿ, ಸದಸ್ಯಸ್ವ ಶುಲ್ಕವನ್ನು ನಿರ್ಧರಿಸಲಾಯಿತು. ಹೊಸಹೊಸ ಸದಸ್ಯರು ಸಂಸ್ಥೆಗೆ ಸೇರಲಾರಂಭಿಸಿದರು. ಸದಸ್ಯರ ಪ್ರಯತ್ನಗಳಿಗೆ ಊರ ಪರಊರ ಕಲಾಭಿಮಾನಿಗಳು ಸ್ಪಂದಿಸಿ ಪ್ರೋತ್ಸಾಹಿಸುತ್ತಾ ಬಂದರು.
ಶ್ರೀ ಪ್ರಭು, ಗಣೇಶ ಕಾರಂತ ಜೋಡಿ ಲಾವಣ್ಯದ ನೇತೃತ್ವವನ್ನು ವಹಿಸಿಕೊಂಡು ಬಂದಿರುತ್ತಾರೆ.ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿ ಸಮಿತಿಯನ್ನು ಪುನಾ ರಚಿಸುತ್ತಾ ಹೊಸಬರಿಗೆ ಜವಬ್ದಾರಿಯನ್ನು ಹೊರುವ ಅವಕಾಶವನ್ನು ನೀಡುತ್ತಾ ಬಂದಿದ್ದಾರೆ.
ಇಂದಿನ ಹೊಸ ಹೊಸ ಸದಸ್ಯರಿಗೆ, ಯುವ ಪೀಳಿಗೆಗೆ ಹಾಗೂ ಕಲಾಭಿಮಾನಿಗಳಿಗೆ ಲಾವಣ್ಯದ ಹುಟ್ಟಿನ ಬಗ್ಗೆ ವಸ್ತು ಸ್ಥಿತಿ ಗೊತ್ತಿರಲಿ ಎಂಬ ಉದ್ದೇಶದಿಂದ ಇದನ್ನು ಉಲ್ಲೇಖಿಸುತ್ತಿದ್ದೇವೆ.

No comments: